ಸ್ವಂತ ವಿಚಾರ ಮಾಡಿ ಯಾವದು ಸರಿ, ಯಾವದು ತಪ್ಪು?
ಸಮರ್ಥನೆ ಎನ್ನುವುದು ಸರಿ, ತಪ್ಪು ವಿಮರ್ಶೆ ಮಾಡಿ, ತನ್ನ ಸ್ವಂತ ಆಲೋಚನೆಯ ನಿರ್ಧಾರ ಆಗಬೇಕು. ಯಾರೋ ಹೇಳಿದ್ದಾರೆ, ಹೆಚ್ಚು ಜನ ಹೇಳುತ್ತಾರೆ, ಒಂದು ಪಕ್ಷದ ನಾಯಕ ಹೇಳುತ್ತಿದ್ದಾನೆ, ಒಂದು ಸಂಘಟನೆಯ ನಾಯಕ ಹೇಳುತ್ತಾನೆ ಎನ್ನುವ ಮಾತ್ರಕ್ಕೆ ನಮ್ಮ ಸಮರ್ಥನೆ ಅವರ ಪರ ಇವರ ವಿರುದ್ಧ ಎಂದಾಗಬಾರದು.
ಈಗ ಸಮಾಜದಲ್ಲಿ ನಡೆಯುತ್ತಿರುವ ಅನೇಕ ವಿಚಾರಗಳು ಇದೆ ರೀತಿಯಾಗಿದೆ. ಸ್ಪಷ್ಟವಾದ ಮಾಹಿತಿ ಇಲ್ಲ. ಅನ್ಯಾಯ ಆಗಿದೆ, ಮೋಸ ಆಗಿದೆ, ಕೊಲೆ ಆಗಿದೆ ಎಂದು ಆರೋಪ ಮಾಡುವುದನ್ನು ಯಾರು ಸಹ ಒಪ್ಪಲು ಸಾಧ್ಯವಿಲ್ಲ. ಅದು ಏನಿದ್ದರೂ ಕಾನೂನು ಮುಖಾಂತರ ಪರಿಹಾರ ದೊರೆಯಬೇಕು. ಮತ್ತೆ ನ್ಯಾಯಾಲಯ ಸರಿ ಇಲ್ಲ, ಪೊಲೀಸ್ ಇಲಾಖೆ ಸರಿ ಇಲ್ಲ, ತನಿಖೆ ಸರಿ ಇಲ್ಲ ಎಂದು ಆರೋಪ ಮಾಡುವುದು ಸರಿ ಅಲ್ಲ. ಇದೆಲ್ಲದರ ಅವ್ಯವಸ್ಥೆಗೆ ನಾವೇ ಕಾರಣರು.
ನಮ್ಮ ಜವಾಬ್ದಾರಿ, ನಮ್ಮ ಹಕ್ಕನ್ನು ಸರಿಯಾಗಿ ತಿಳಿದುಕೊಳ್ಳದೇ, ಇನ್ನೊಬ್ಬರನ್ನು ನಂಬಿ ಎಲ್ಲಾ ವ್ಯವಸ್ಥೆ ನಡೆಯುವಂತೆ ಮಾಡಿದರೆ, ಇನ್ನೊಬ್ಬರ ಮಾತಿನಂತೆ ಎಲ್ಲಾವು ನಡೆಯುತ್ತದೆ. ಅದನ್ನು ಮತ್ತೆ ಪ್ರಶ್ನೆ ಮಾಡುವ ಅಧಿಕಾರ ಕಳೆದಿಕೊಂಡಿರುತ್ತೇವೆ. ಹಾಗಾಗಿ ಪ್ರಶ್ನೆ ಮಾಡುವ ಅಧಿಕಾರ ಉಳಿಸಿಕೊಳ್ಳಬೇಕಾದರೆ ಅಧಿಕಾರ ನಮ್ಮ ಕೈಯಲ್ಲಿ ಇರಬೇಕು. ಯಾರದ್ದೋ ಕೈಯಲ್ಲಿ ಅಧಿಕಾರ ಕೊಟ್ಟು ನಂತರ ಆರೋಪ, ಪ್ರತಿಭಟನೆ ಮಾಡಿ ಪ್ರಯೋಜನ ಇಲ್ಲ. ಹಾಗಾಗಿ ಇನ್ನೂ ಮುಂದೆಯಾದರೂ ಪ್ರಜಾಪ್ರಭುತ್ವ ದೇಶದ ಪ್ರತಿ ಪ್ರಜೆ ಪ್ರಭುವಾಗಬೇಕಾದರೆ ಅಧಿಕಾರ ತನ್ನ ಕೈಯಲ್ಲಿ ಇರುವಂತೆ ಮಾಡಬೇಕು ಎಂದು ತನ್ನ ವೋಟಿನ ಹಕ್ಕನ್ನು ಉಪಯೋಗಿಸಬೇಕು.
ಅಧಿಕಾರ ತನ್ನ ಕೈಗೆ ಬರುವಂತೆ ಮಾಡಿದ ನಂತರ ತನ್ನ ಅಭಿವೃದ್ಧಿ, ತನ್ನ ದೇಶದ ಅಭಿವೃದ್ಧಿ, ತನ್ನ ಧರ್ಮದ ರಕ್ಷಣೆ ಎಲ್ಲವನ್ನು ಮಾಡುವ ಅಧಿಕಾರ ಪಡೆದು ಮಾಡುತ್ತೇವೆ. ಇಲ್ಲದಿದ್ದರೆ ಇನ್ನೊಬ್ಬ ಒಳ್ಳೆಯವ ಮಾಡುತ್ತಾನೆ, ಉದ್ದಾರ ಮಾಡುತ್ತಾನೆ, ನನ್ನ ಜಾತಿಯವನು ಮಾಡುತ್ತಾನೆ ಎಂದು ನಂಬಿ ವೋಟಿನ ಜೊತೆ ಅಧಿಕಾರ ಬೇರೆಯವರ ಕೈಗೆ ಕೊಡುವ ಕಾರಣ ಪ್ರತಿ ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿದುಕೊಳ್ಳಬೇಕಾಗಿದೆ.