ಮದುವೆ ವರ ಹುಡುಕುವ ಜನರು!
ಹೀಗೆ ಇಬ್ಬರು ಗೆಳೆಯರು ಕೂತು ಮಾತಾಡ್ತಾ ಇದ್ರು
ಸಂಗಪ್ಪ : ನಂಗೊಬ್ಬಳು ಮೊಮ್ಮಗಳಿದ್ದಾಳೆ. ಮದ್ವೆ ವಯಸಿನವಳು. ಬಿಎ ತನಕ ಓದಿದ್ದಾಳೆ. ಕೆಲಸ ಮಾಡ್ತಾ ಇದ್ದಾಳೆ. ಐದೂ ವರೆ ಅಡಿ ಎತ್ತರ ಇದ್ದಾಳೆ. ಹಾಗೆ ತುಂಬಾ ಸುಂದರವಾಗಿಯೂ ಇದ್ದಾಳೆ. ಅವಳಿಗೆ ತಕ್ಕ ವರ ಯಾರಾದರು ಇದ್ರೆ ತಿಳಿಸು.
ನಿಂಗಪ್ಪ: ನಿನ್ ಮೊಮ್ಮಗಳಿಗೆ ಯಾವ ತರದ ಕುಟುಂಬದ ವರ ಬೇಕಪ್ಪ..?
ಸಂಗಪ್ಪ: ಹೆಚ್ಚೇನು ಬೇಡ ಮಾರಾಯ. ಹುಡುಗ ಎಂಎ/ಎಂ.ಟೆಕ್ ಮಾಡಿದ್ರೆ ಸಾಕು. ಸ್ವಂತದೊಂದು ಮನೆ, ಮನೆಯಲ್ಲಿ ಎಸಿ ಇದ್ದು, ಮನೆ ಮುಂದೊಂದು ತೋಟ ಇರಬೇಕು. ಒಳ್ಳೆ ಕೆಲಸ ಇರಬೇಕು. ಹೆಚ್ಚಲ್ಲ ಅಂದ್ರು ಒಂದೆರಡು ಲಕ್ಷ ಸಂಬಳ ಬರುವ ಕೆಲಸ ಇರಬೇಕು. ಇದೆಲ್ಲಾ ಇದ್ದ ಮೇಲೆ ಕಾರು ಇದ್ದೇ ಇರುತ್ತೆ ಬಿಡು. ಇಷ್ಟು ಸಾಕು ಕಣಯ್ಯ.
ನಿಂಗಪ್ಪ : ಮತ್ತೇನಾದರೂ ಇದ್ರೆ ಈಗಲೇ ಹೇಳ್ಬಿಡು...
ಸಂಗಪ್ಪ: ಅಯ್ಯೋ ನಾನು ಹೇಳಬೇಕಾದ ಮುಖ್ಯವಾದ ವಿಚಾರನೇ ಮರೆತು ಬಿಟ್ಟಿದೆ ನೋಡು. ಹಾ.. ಹುಡುಗ ಒಬ್ಬನೇ ಇರಬೇಕು. ಅಪ್ಪಅಮ್ಮ, ಅಕ್ಕತಂಗಿ, ಅಣ್ಣತಮ್ಮ ಅಂತ ಯಾರೂ ಇರಬಾರದು. ಎಲ್ಲರು ಇದ್ರೆ ಚಿಕ್ಕ ಪುಟ್ಟ ವಿಚಾರಗಳಿಗೆ ಮುಖ ಮುನಿಸು, ಜಗಳ ಅಂತ ಆಗುತ್ತೆ. ಯಾರೂ ಇಲ್ಲಾಂದ್ರೆ ನೆಮ್ಮದಿಯಿಂದ ಇರಬಹುದಲ್ವಾ.
ನಿಂಗಪ್ಪ : ಕಣ್ಣಲ್ಲಿ ನೀರು ತುಂಬ್ಕೊಂಡು ಹೇಳ್ದ ನಂಗೊಬ್ಬ ಫ್ರೆಂಡ್ ಇದ್ದ ಅವನಿಗೊಬ್ಬ ಮಗ ಇದ್ದಾನೆ. ಅಪಘಾತ ಒಂದರಲ್ಲಿ ಗಂಡ ಹೆಂಡತಿ ಹೋಗ್ಬುಟ್ರು. ಇವಾಗ ಅವರ ಮಗ ಒಬ್ಬನೇ ಇದ್ದಾನೆ. ಅಕ್ಕ ತಂಗಿ, ಅಣ್ಣ ತಮ್ಮ ಅಂತ ಯಾರೂ ಇಲ್ಲ. ಕಾರು, ಬಂಗಲೆ, ಒಳ್ಳೆ ಸಂಬಳ ತರೋ ಕೆಲಸ, ಮನೆಯಲ್ಲಿ ಆಳುಕಾಳು ಅಂತ ಇದ್ದಾರೆ.
ಸಂಗಪ್ಪ : ಹಾಗಾದ್ರೆ ಮಾತಾಡಿ ಸಂಬಂಧ ನಿಶ್ಚಯ ಮಾಡಿಸ್ಬಿಡು...
ನಿಂಗಪ್ಪ : ಆದ್ರೆ... ಹುಡುಗ ಒಂದು ಷರತ್ತು ಇಟ್ಟಿದ್ದಾನೆ. ಹುಡುಗಿಗೂ ಅಪ್ಪ ಅಮ್ಮ, ಅಕ್ಕ ತಂಗಿ, ಅಣ್ಣ ತಮ್ಮ ಅಂತ ಯಾರೂ ಇರಬಾರದಂತೆ ಎಂದು ಹೇಳುತ್ತಲೇ ನೀವೆಲ್ಲಾ ಆತ್ಮಹತ್ಯೆ ಮಾಡ್ಕೋ ಬಿಡಿ. ನಂತರ ಹುಡುಗಂಗೆ ಒಪ್ಸಿ ಮದುವೆ ನಾನೇ ನಿಂತು ಮಾಡಿಸ್ತೀನಿ. ನಿಮ್ಮ ಮೊಮ್ಮಗಳು, ಅಳಿಯ ಚನ್ನಾಗಿರ್ತಾರೆ. ಏನಂತೀಯೆ..
ಸಂಗಪ್ಪ : ನಿಂಗೇನಾರ ತಲೆ ಕೆಟ್ಟಿದೀಯ. ಇದೆಂಥ ಹುಚ್ಚು ಷರತ್ತು ಮಾರಾಯ. ನಾವ್ಯಾಕೆ ಆತ್ಮಹತ್ಯೆ ಮಾಡ್ಕೋಬೇಕು. ನಾಳೆ ಮೊಮ್ಮಗಳ ಕಷ್ಟ ಸುಖ, ನೋವು, ನಲಿವಿನಲ್ಲಿ ಯಾರು ಜೊತೆ ಇರ್ತಾರೆ.
ನಿಂಗಪ್ಪ : ಮೆಚ್ಚಿದೆ ಕಣಯ್ಯ ನಿನ್ನ.. ಭೇಷ್.. ನಿನ್ನ ಸಂಸಾರ 'ಸಂಸಾರ'. ಬೇರೆಯವರ ಸಂಸಾರ 'ಸಂಸಾರ' ಅಲ್ವಾ. ನಿಂಗೆ ನಿನ್ ಕುಟುಂಬದ ಸದಸ್ಯರು ಇರಬೇಕು. ಆದ್ರೆ ಬೇರೆಯವರಿಗೆ ಕುಟುಂಬ ಸದಸ್ಯರು ಇರಬಾರದ. ನೋಡು ಮೊದಲು ನಿನ್ನ ಮಕ್ಕಳಿಗೆ ಕುಟುಂಬ, ಕುಟುಂಬದ ಮಹತ್ವ ತಿಳಿಸು. ಒಂದು ಸಂಸಾರ ಅಂದ್ಮೇಲೆ ದೊಡ್ಡೋರು, ಚಿಕ್ಕೋರು ಇದ್ದು ಸಹಬಾಳ್ವೆಯಿಂದ ಜೀವನ ನಡೆಸುವುದು ಎಷ್ಟು ಮುಖ್ಯ ಅನ್ನೋದನ್ನು ಅರ್ಥ ಮಾಡಿಸು. ಇಲ್ಲವೆಂದರೆ ಮನುಷ್ಯಂಗೆ ನೋವು, ನಲಿವಿನ ಮಹತ್ವ ತಿಳಿಯದೇ ಬದುಕು ನೀರಸ ಅನ್ನಿಸತೊಡಗುತ್ತದೆ ಗೊತ್ತಾಯ್ತಾ...
ಸಂಗಪ್ಪ : ನಾಚಿಕೆಯಿಂದ ತಲೆ ತಗ್ಗಿಸಿಕೊಂಡು ಹೋದ.