ಕಾಪಿ ಮತ್ತು ಮೆಣಸು ಬೆಳೆದ ಕ್ರಾಂತಿ
ರಬ್ಬರಿಗೆ ಮೆಣಸು, ಕರಾವಳಿಗೆ ಕಾಫಿ ತಂದ ಅಜಿತರ ಸಾಹಸ!
ನಿಷ್ಕ್ರಿಯತೆ, ಸೋಮಾರಿತನ ಕೃಷಿಯ ಬಹಳ ದೊಡ್ಡ ಶತ್ರು. ನನಗೆ ಇಷ್ಟೇ ಸಾಕು, ಮಾಡೋದೆಲ್ಲ ಮಾಡಿ ಆಯಿತು, ಇನ್ನು ಸುಮ್ಮಗೆ ಕೂತರೆ ಸಾಕು, ಆದಾಯ ಅದರಷ್ಟಕ್ಕೆ ಬರುತ್ತದೆ, ನೆಟ್ಟ ಗಿಡ ಮರಗಳು ದುಡ್ಡು ಉದುರಿಸುತ್ತವೆ ಎಂದು ಭ್ರಮಿಸುವಷ್ಟು ಕೃಷಿ ಯಾವತ್ತೂ ಲಾಭಕರವಲ್ಲ. " ಸದಾ ಒಳಗೊಳ್ಳುವಿಕೆ, ನಿರಂತರ ಗಮನಿಸುವುದು,ಬೇರೆಯವರ ತೋಟ ಭೇಟಿ, ಕೃಷಿ ಪ್ರವಾಸ, ಹೊಸ ಹೊಸ ಬೆಳೆಗಳನ್ನು ತಮ್ಮ ಭೂಮಿಯಲ್ಲಿ ಪ್ರಯೋಗಿಸುವುದು...ಇವಿಷ್ಟು ಕೃಷಿಕ ಮಾಡುತ್ತಲೇ ಇದ್ದಾಗ ಆತ ಯಶಸ್ವಿಯಾಗುವುದು ಖಂಡಿತ" ಎನ್ನುತ್ತಾರೆ ಉಪ್ಪಿನಂಗಡಿ ಸಮೀಪದ ದಾರಂದಕುಕ್ಕುವಿನ ಪ್ರಯೋಗಶೀಲ ಕೃಷಿಕ ಅಜಿತ್ ಪ್ರಸಾದ್.
ಈ ಮೇಲಿನ ಮಾತುಗಳನ್ನು ಸಾಕ್ಷಿಕರಿಸುವ ಮೂರು ಪ್ರಮುಖ ಪ್ರಯೋಗ ಅಜಿತರ ಕೃಷಿ ಆವರಣದುದ್ದಕ್ಕೂ ತೆರೆದು ತೋರುವಂತಿದೆ. ಅಡಿಕೆ,ತೆಂಗು ಮುಂತಾದ ಸಾಂಪ್ರದಾಯಿಕ ಕೃಷಿಯ ಜೊತೆಗೆ ಕರಾವಳಿಗೆ ಮಾದರಿಯಾಗಬಹುದಾದ ಈ ಹೊಸ ಕೃಷಿ ಪ್ರಯತ್ನ ಈ ಭಾಗದ ಬೇರೆ ಕೃಷಿಕರೂ ಅನುಕರಿಸುವಂತಿದೆ. ಒಂದು- ರಬ್ಬರ್ ತೋಟದ ಒಳಗಡೆ ಪ್ರತಿ ಮರಗಳಿಗೆ ಅಂಟಿ ಬೆಳೆದ ಕಾಳು ಮೆಣಸು. ಎರಡನೆಯದ್ದು ಮಲೆನಾಡಿಗೆ ಮಾತ್ರ ಸೀಮಿತವಾಗಿದ್ದ ಕಾಫಿಯನ್ನು ಅಡಿಕೆ ಮತ್ತು ರಬ್ಬರ್ ತೋಟದ ನಡುವೆ ಎಡೆಬೆಳೆಯಾಗಿ ಯಶಸ್ವಿಯಾಗಿ ಬೆಳೆಸಿದ್ದು. ಮಲೆನಾಡಿನ ಕಾಫಿ ತೋಟದ ಒಳಗಡೆ ಸೊಂಪಾಗಿ ಬೆಳೆಯುವ ಮೆಣಸನ್ನು ತಬ್ಬಿಕೊಳ್ಳುವ ಆಧಾರ ಸಿಲ್ವರ್ ಗಿಡಗಳನ್ನು ಕರಾವಳಿಗೆ ತಂದು ಯಶಸ್ವಿಯಾಗಿ ಬೆಳೆಸಿ ಅದರಲ್ಲೂ ಕಾಳುಮೆಣಸು ನೆಟ್ಟದ್ದು.
ಅಡಿಕೆಗೆ ಯೋಗ್ಯವಲ್ಲದ ಏರು ಗುಡ್ಡದ ಮೇಲೆ ಸುಮಾರು ಮೂರು ಸಾವಿರದಷ್ಟು ರಬ್ಬರ್ ಗಿಡ ನೆಟ್ಟು ಟಾಪಿಂಗ್ ಶುರು ಮಾಡಬೇಕು ಅನ್ನುವಾಗ ರೇಟು ಬಿತ್ತು. ಕುಶಲ ಪ್ರಾಮಾಣಿಕ ಟ್ಯಾಪರುಗಳ ಕೊರತೆ ಬೇರೆ. ಅಡಿಕೆಗೆ ಬೆಲೆ ಇರುತ್ತಲೇ ಇತ್ತು. ಮತ್ತೆ ರಬ್ಬರ್ ಕಿತ್ತು ಅಡಿಕೆ ಬೆಳೆಸುವುದು ಅಥವಾ ಬೇರೆ ಕೃಷಿ ವಿಸ್ತರಿಸುವುದು ಎಂದು ಯೋಚನೆ ಮಾಡುತ್ತಿರುವಾಗ ಫಾರ್ಮ್ ಟಿವಿಯ ವೆಂಕಟರಮಣ ಹೆಗಡೆ ಇವುಗಳ ನಡುವೆ ಕಾಫಿ ಬೆಳೆಸಿ ಎಂದರು. ಮೊದಮೊದಲು ಅಜಿತರಿಗೆ ಇದು ದುತ್ಸಾಹಸ ಅನಿಸಿತ್ತು , ಕಾರಣ ಹೇಳಿಕೇಳಿ ಕರಾವಳಿಯ ತಾಪಮಾನ ದಿನೇ ದಿನೇ ಏರುತ್ತಿದೆ, ಮಾರ್ಚ್ ನಂತರ ಎರಡು ಮೂರು ತಿಂಗಳು 40 ಡಿಗ್ರಿ ಉಷ್ಣಾಂಶವನ್ನು ದಾಟುತ್ತದೆ. ತಂಪು ತಂಪು ಮಲೆನಾಡಿನ ಪರಿಸರಕ್ಕೆ ಮಾತ್ರ ಸಾಧ್ಯವಾಗುವ ಕಾಫಿ ಕೃಷಿ ಇಲ್ಲಿ ಸಾಧ್ಯವೇ ಎನ್ನುವ ಪ್ರಶ್ನೆ ಸಹಜವಾಗಿಯೇ ಅವರಲ್ಲಿ ಹುಟ್ಟಿಕೊಂಡಿತು. ಕಾಫಿ ಕೃಷಿಯಲ್ಲಿ ಪ್ರಯೋಗ ಮಾಡಿ ಗೆದ್ದವರು, ದೊಡ್ಡ ಮಟ್ಟದಲ್ಲಿ ಯಶಸ್ವಿಯಾದವರು ಸ್ಥಳೀಯವಾಗಿ ಯಾರೂ ಇರಲಿಲ್ಲ. ಆದರೆ ಕೊಡಗು ಚಿಕ್ಕಮಗಳೂರು ಮುಂತಾದ ಕಡೆಯ ಕೃಷಿಕರ ಒಡನಾಟ ಇಟ್ಟುಕೊಂಡ ಒಂದಷ್ಟು ಮಂದಿ ತಮ್ಮ ಕರಾವಳಿಯ ಸಾಂಪ್ರದಾಯಿಕ ಅಡಿಕೆ ತೋಟದ ಮೂಲೆಯಲ್ಲೋ ಅಂಗಳದ ಬದಿಯಲ್ಲೋ ಪ್ರಯೋಗಾಥವಾಗಿ ಒಂದೆರಡು ಕಾಫಿ ಗಿಡ ಬೆಳೆದದ್ದಿದೆ. ಗೊಬ್ಬರ ಪೋಷಣೆ ನೀರಾವರಿಯಿ ಲ್ಲದೆ ಅದು ಅದರಷ್ಟಕ್ಕೆ ಬೆಳೆದು ಹೂವು ಬಿಟ್ಟು ಕಾಯಿ ಕಟ್ಟಿ ಹಣ್ಣಾಗಿ ಉದುರಿ ಕೊಳೆತು ಹೋದ ಪ್ರಸಂಗಗಳೇ ಜಾಸ್ತಿ. ಅಪರೂಪಕ್ಕೆ ಕಾಫಿ ಪ್ರಿಯರು ಹಣ್ಣು ಕೊಯ್ದು ಸಂಸ್ಕರಿಸಿ ಪುಡಿಮಾಡಿ ಬಳಸಿದ್ದು ಇದೆ. ಅಜಿತರ ಮನೆಯಂಗಳದಲ್ಲಿ ಇದೇ ರೀತಿ ಒಂದೆರಡು ಕಾಫಿ ಗಿಡಗಳು ಸೊಂಪಾಗಿ ಬೆಳೆದಿದ್ದವು.ಯಾವ ಚೋದಕವೂ ಇಲ್ಲದೆ ತನ್ನಷ್ಟಕ್ಕೆ ತಾನೇ ಬೆಳೆದ ಆ ಕಾಫಿ ಗಿಡಗಳು ಅವರ ಪಾಲಿಗೆ ಸ್ಪೂರ್ತಿಯಾದುವು.ವೆಂಕಟರಮಣ ಹೆಗಡೆಯವರ ಸಲಹೆ ಬೇರೆ.ರಬ್ಬರ್ ಮರ ಮತ್ತು ಅಡಿಕೆಯೆಡೆಯಲ್ಲಿ ಅಜಿತ್ ಕಾಫಿ ನೆಟ್ಟೆಬಿಟ್ಟರು . ಈಗ ಅವರಲ್ಲಿ ಸುಮಾರು ನಾಲ್ಕು ಸಾವಿರಕ್ಕಿಂತ ಹೆಚ್ಚು ಕಾಫಿ ಗಿಡಗಳಿವೆ.ಮೂರು ವರ್ಷದ ಪ್ರಾಯದವು. ಈ ವರ್ಷ ಭಾಗಶ: ಹೂ ಬಿಟ್ಟಿವೆ.ಮುಂದಿನ ವರ್ಷ ಒಳ್ಳೆಯ ಬೆಳೆಯ ನಿರೀಕ್ಷೆ ಅಜಿತರದ್ದು.
ಕರಾವಳಿಯಲ್ಲಿ ಸಾಂಪ್ರದಾಯಿಕ ಅಡಿಕೆ ತೆಂಗು ಕೊಕ್ಕೋ ಬಾಳೆ ಮೆಣಸು ರಬ್ಬರ್ ಬಿಟ್ಟು ಇಷ್ಟೊಂದು ಗರಿಷ್ಠ ಮಟ್ಟದಲ್ಲಿ ಹೊಸ ಬೆಳೆ ಪ್ರಯೋಗ ಮಾಡುವುದೆಂದರೆ ಆರ್ಥಿಕ ಬಲದೊಂದಿಗೆ ನೈತಿಕ ಶಕ್ತಿ, ಧೈರ್ಯವೂ ಬೇಕು. ಹಾಗಂತ ಅಜಿತರು ಅಗರ್ಭ ಶ್ರೀಮಂತರಲ್ಲ. ತನ್ನ ಭೂಮಿ ಮೇಲೆ ಅಂಗೈಯಗಳ ಖಾಲಿ ಜಾಗ ಉಳಿಯಬಾರದು, ಕೃಷಿಯ ಉತ್ಪನ್ನ ಭೂಮಿಯ ಪ್ರತಿಫಲ ವಾಪಸು ಅದಕ್ಕೆ ಒಳಸು ರಿಯಾಗಿ ಸಲ್ಲಬೇಕು ಎಂಬ ಹಸಿರು ಆಶಯ ಅಜಿತ ರದ್ದು.
ಯಾವುದೇ ಹೊಸ ಕೃಷಿ ಪ್ರಯೋಗವಿರಲಿ ಅದರಲ್ಲಿ ತಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಅವರ ಉದ್ದೇಶ ಛಲ ಹಠ ಪ್ರಯೋಗಗಳಿಗೆ ಹೆಚ್ಚು ಪ್ರಚೋದಕವಾಗಿರುವುದು ಸದಾ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಅವರ ಕೃಷಿ ಪ್ರವಾಸದ ಆಸಕ್ತಿ ಮತ್ತು ಹುಚ್ಚು.ವಿಯೆಟ್ನಾಂ,ಕಾಂಬೋಡಿಯ ಮುಂತಾದ ವಿದೇಶಗಳಿಗೂ ಹೋಗಿ ಅವರು ಅಧ್ಯಯನ ಮಾಡಿದ್ದಾರೆ.ಅಲ್ಲಿಯ ಕಾಫಿ ಕೃಷಿ ಮಾದರಿಗಳನ್ನು ಗಮನಿಸಿದ್ದಾರೆ. ಅಷ್ಟೇ ಅಲ್ಲ, ನಡುವಯಸ್ಸು ಮೀರಿದ ಮೇಲೂ ' ಸೆವೆನ್ ಬೀನ್' ಎನ್ನುವ ಸಕಲೇಶಪುರದ ಕಾಫಿ ತರಬೇತಿ ಸಂಸ್ಥೆಯ ಕ್ಲಾಸಿಗೆ ಸೇರಿ ನಿಯಮನಿಷ್ಠ ವಿದ್ಯಾರ್ಥಿಯಾಗಿ ತರಗತಿಯಲ್ಲಿ ಕೂತು ಅಧ್ಯಯನ ಮಾಡುತ್ತಿದ್ದಾರೆ. ಕಾಫಿ ಕೃಷಿಕರ ಒಡನಾಟ,ತರಗತಿಯ ಅಧ್ಯಯನ, ವಿದೇಶಿ ಪ್ರವಾಸ ಈ ಎಲ್ಲಾ ಅನುಭವಗಳನ್ನು ತಮ್ಮ ಕೃಷಿ ಆವರಣದ ಪ್ರಯೋಗಗಳಿಗೆ ಬುನಾದಿಯಾಗಿಸಿದ್ದಾರೆ . ಕರಾವಳಿಯಲೀಗಾ ಹೊಸದಾಗಿ ಕಾಫಿಯನ್ನು ಪರಿಚಯಿಸುವವರಿಗೆ ಅಜಿತ್ ಪ್ರಸಾದ್ ರೈ ಒಬ್ಬ ಸೂಕ್ತ ಮಾರ್ಗದರ್ಶಕ ರಾಗಬಲ್ಲರು ಅನ್ನುವುದಕ್ಕೆ ಯಾವ ಅನುಮಾನವೂ ಇಲ್ಲ.
ಇತ್ತೀಚಿಗೆ ಕಾಫಿ ಬೋರ್ಡಿನ ನುರಿತ ಅಧ್ಯಯನ ತಂಡ ಗರಿಷ್ಠ ಉಷ್ಣಾಂಶ ಇರುವ ಕರಾವಳಿಗೆ ಭೇಟಿಕೊಟ್ಟು ಇಲ್ಲಿಯ ಹವಾಮಾನ ಉಷ್ಣಾಂಶತೆಗಳನ್ನು ಅಳೆದು ತೂಗಿ ಕಾಫಿ ಬೆಳೆಯಬಹುದು, ಬೆಳೆಯಿರಿ ಎನ್ನುವ ಸಲಹೆಯನ್ನು ಕೊಟ್ಟಿರುವುದು ಕೂಡ ಇಲ್ಲಿ ಉಲ್ಲೇಖನೀಯ . ಮುಂದಿನ ದಿನಗಳಲ್ಲಿ ಅಡಿಕೆಯ ಊರಿನಲ್ಲೂ ಕಾಫಿ ಸಾಧ್ಯವಾಗುವ ಸುಳಿವು ಈಗಾಗಲೇ ಲಭ್ಯವಾಗುತ್ತಿದೆ.
ಅಜಿತ್ ಪ್ರಸಾದ್ ಕಾಫಿಯ ಪ್ರತಿ ಬುಡಬುಡಗಳಿಗೆ ಹನಿ ಹನಿ ನೀರಾವರಿಯನ್ನು ಅಳವಡಿಸಿದ್ದಾರೆ. ಪೋಷಕಾಂಶದ ಕೊರತೆ ಆಗದ ರೀತಿಯಲ್ಲಿ ಗೊಬ್ಬರ, ಕೆಂಪು ಮಣ್ಣು ನಿಯತವಾಗಿ ಕೊಟ್ಟಿದ್ದಾರೆ . ಸುಮಾರು ಮೂರುವರೆ ಸಾವಿರದಷ್ಟು ಅರೇಬಿಕ್ ಜಾತಿಯ ಗಿಡಗಳೇ ಅವರಲ್ಲಿದೆ. ಉಷ್ಣಾಂಶ 40 ಡಿಗ್ರಿ ದಾಟಿದ ಮೇಲೆ,ಅದರಲ್ಲೂ ಹೂ ಕಟ್ಟಿದ ಮೇಲೆ ಪ್ರತಿ ದಿವಸ ನೀರು ಕೊಡುವುದು ಅಗತ್ಯ ಎನ್ನುತ್ತಾರೆ ಅಜಿತ್. ಸಹಜ ಕಾಫಿ ಬೆಳೆಯ ಮಲೆನಾಡಿನಲ್ಲಾದರೆ ಹೂ ಬಿಡುವಾಗ ಮಾತ್ರ ಅಥವಾ ಹೂ ಬಿಡಿಸಲು ನಿರ್ದಿಷ್ಟ ಪ್ರಮಾಣದ ತುಂತುರು ನೀರಾವರಿ ವ್ಯವಸ್ಥೆಯನ್ನು ಮಾಡುವುದಿದೆ. ಆದರೆ ಇಲ್ಲಿ ಗರಿಷ್ಠ ಉಷ್ಣಾಂಶ ಇರುವುದರಿಂದ ಬುಡಕ್ಕೆ ನಿತ್ಯ ನಿರಂತರ ನೀರು ಕೊಡಬೇಕಾದ ಅಗತ್ಯವನ್ನು ಅಜಿತ್ ಒತ್ತಿ ಹೇಳುತ್ತಾರೆ.
ಕಡಿದು ಉರುಳಿಸಬೇಕಾದ ಸಾವಿರಾರು ರಬ್ಬರ್ ಗಿಡಗಳನ್ನು ಹಾಗೆ ಉಳಿಸಿಕೊಂಡು ಒಂದು ಕಡೆ ಕಾಫಿಗೆ ನೆರಳು ಮರಗಳಾಗಿಯೂ ಮತ್ತೊಂದು ಕಡೆ ಟಾಪಿಂಗ್ ಮಾಡದ ಅವುಗಳ ಬುಡಬುಡಗಳಿಗೆ ಕಾಳು ಮೆಣಸು ನೆಟ್ಟದ್ದು ಮತ್ತೊಂದು ಯಶಸ್ವಿ ಸಾಧನೆ .ಇಂತಹ ಪ್ರಯೋಗ ಈ ಭಾಗದ ಬೇರೆ ಕೃಷಿಕರಲ್ಲೂ ಭಾಗಶಃ ನಡೆದಿದೆ. ಆದರೆ ಅವುಗಳನ್ನು ವ್ಯವಸ್ಥಿತವಾಗಿ ಕಾಫಿಯೊಂದಿಗೆ ಹೊಂದಿಸಿಕೊಂಡು ಬೆಳೆಸಿದ ಕೀರ್ತಿ ಅಜಿತರದ್ದು. ಹಾಗೆ ನೆಟ್ಟ ಮೆಣಸಿಗೀಗ ಮೂರನೆಯ ವರ್ಷ. ಸೊoಪಾಗಿ ರಬ್ಬರಿಗೆ ಅಂಟಿಕೊಂಡು ಈ ವರ್ಷವೇ ಕಾಯಿ ಕಚ್ಚಲು ಆರಂಭವಾಗಿದೆ. ಕಾಫಿಯೂ ಸೇರಿದಂತೆ ಇವುಗಳ ಬುಡಗಳಿಗೂ ಗೊಬ್ಬರದೊಂದಿಗೆ ಕೆಂಪು ಮಣ್ಣು ಪ್ರತಿವರ್ಷ ಕೊಡಲಾಗುತ್ತಾರೆ.
ಹಾಗಂತ ಮೆಣಸು ಅಜಿತರಿಗೆ ಹೊಸತಲ್ಲ, ಮೊದಲೇ ಹೇಳಿದಂತೆ ಅಡಿಕೆ ಮೆಣಸು ತೆಂಗು ಕೃಷಿಯಲ್ಲಿ 30 ವರ್ಷದ ಅನುಭವ. ಬರೀ ಅಡಿಕೆ ತೋಟದಲ್ಲೇ ವಾರ್ಷಿಕ ಐದು ಟನ್ನಿನಷ್ಟು ಮೆಣಸು ಬೆಳೆ ಪಡೆಯುತ್ತಾರೆ. ಮೆಣಸಿನ ವಿಚಾರದಲ್ಲಿ ರಾಜ್ಯದಾದ್ಯಂತ ನಡೆದಾಡುವ ವಿಶ್ವಕೋಶ ಎಂದೇ ಹೆಸರಾದ ವೇಣುಗೋಪಾಲರೊಂದಿಗೆ 8 ವರ್ಷಗಳಿಂದ ಒಡನಾಟ ಇಟ್ಟುಕೊಂಡ ಅಜಿತ್ ಈಗ ಈ ಕೃಷಿಯಲ್ಲಿ ಬೇರೆಯವರಿಗೆ ಮಾರ್ಗದರ್ಶನ ಮಾಡುವಷ್ಟು ಪರಿಪೂರ್ಣ ಅನುಭವವನ್ನು ಪಡೆದಿದ್ದಾರೆ.
ಪರಿಪೂರ್ಣತೆ ಎಂಬುದೇ ಕಾಳು ಮೆಣಸಿನ ವಿಷಯದಲ್ಲಿ ಬಹಳ ದೊಡ್ಡ ಮಾತು. ಯಾಕೆಂದರೆ ಕರಾವಳಿ ಕೇರಳ ಮಲೆನಾಡು ಎಲ್ಲೇ ಇರಲಿ ಮೆಣಸು ಕೃಷಿ ಯಾವಾಗ ಕೈ ಕೊಡುತ್ತದೆ ಹೇಳಲಾಗುವುದಿಲ್ಲ. ಕಷ್ಟಪಟ್ಟು ಬೆಳೆಸಿ ಬೆಳೆ ಕೈಗೆ ಬಂತು ಎನ್ನುವಾಗ ಒಂದಲ್ಲ ಹತ್ತು ಹಲವು ರೋಗಗಳಿಗೆ ತುತ್ತಾಗಿ ಇಡೀ ತೋಟಕ್ಕೆ ತೋಟವೇ ನಾಶವಾಗುವ ಪ್ರಮೇಯ ಇದ್ದೇ ಇದೆ. ಈ ರೋಗ ಮೂಲಗಳನ್ನು ಸೂಕ್ಷ್ಮವಾಗಿ ಗಮನಿಸಿ, ಆಯಾಯ ಕಾಲಕ್ಕೆ ಅವುಗಳಿಗೆ ಕೊಡಬೇಕಾದ ಗೊಬ್ಬರ ಪೋಷಕಾಂಶ ಸಿಂಪಡನೆ ಇವೆಲ್ಲವನ್ನೂ ಕಟ್ಟುನಿಟ್ಟಾಗಿ ಮಾಡಲೇ ಬೇಕು. ಇಂತಹ ಸೂಕ್ಷ್ಮ ಕೃಷಿಯ ಹಾದಿಯಲ್ಲಿ ಕಳೆದ 30 ವರ್ಷಗಳ ತನ್ನ ಅನುಭವದಲ್ಲಿ ಯಶಸ್ವಿಯಾದವರು ಅಜಿತ್ ಪ್ರಸಾದ್.
ಅಪಾಯಕಾರಿ ರೋಗ ಗೆದ್ದು, ಮೆಣಸಿನಲ್ಲಿ ಮಾದರಿಯಾಗಿ,ಗರಿಷ್ಠ ಆದಾಯ ತರುವ ಬೆಳೆಮೂಲದೊಂದಿಗೆ ಅವರು ಇದೇ ಕೃಷಿಯ ಆಧಾರಗಿಡವಾಗಿ ಕರಾವಳಿಯಲ್ಲಿ ಎಂದೂ ಎಲ್ಲೂ ಬೆಳಯಲಾರದು ಎಂದು ಜನ ನಂಬಿದ್ದ ಸಿಲ್ವರ್ ಗಿಡವನ್ನು ತಮ್ಮ ಖಾಲಿಗುಡ್ಡದ ಮೇಲೆ ಬೆಳೆಸಿ ಯಶಸ್ವಿಯಾಗಿದ್ದಾರೆ. ಅವುಗಳಿಗೆ ಈಗಾಗಲೇ ಯಶಸ್ವಿಯಾಗಿ ಕಾಳುಮೆಣಸು ಬಳ್ಳಿಗಳನ್ನು ನೆಟ್ಟಿದ್ದಾರೆ.
ಹೌದು ಬೇರೆ ಎಲ್ಲಾ ಕ್ಷೇತ್ರಗಳಿಗಿಂತ ಹೆಚ್ಚು ಪ್ರಯೋಗಕ್ಕೆ ಅವಕಾಶ ಇರುವ ಕ್ಷೇತ್ರವೇ ಕೃಷಿ. ಭೂಮಿ ಯಾವುದನ್ನು ತನ್ನ ಬಸಿರಿಗೆ ಬೇಡ ಎನ್ನುವುದಿಲ್ಲ. ರೈತ ತನ್ನೊಳಗಿಟ್ಟ ಬೀಜ ಸಸಿ ಎಲ್ಲವನ್ನು ಸೊಂಪಾಗಿ ಬೆಳೆಸಿ ಪ್ರತಿಫಲ ಕೊಟ್ಟೆ ಕೊಡುತ್ತದೆ. ಹಾಗಂತ ಎಲ್ಲವನ್ನೂ ಕೊಡುತ್ತದೆ ಎಂಬ ಕಾರಣಕ್ಕಾಗಿ ಭೂಮಿ ಬಗೆದು ರಾಶಿ ಹಾಕುವುದಲ್ಲ. ಬೀಜ ಸಸಿಗಳಿಗೂ ಒಂದು ನಿರ್ದಿಷ್ಟ ಅಂತರದ ಅವಶ್ಯಕತೆ ಇದೆ. ಬೆಳಕು ನೀರು ಯತೇಚ್ಛವಾಗಿ ಬೇಕೇ ಬೇಕು. ಆಯಾಪಾಯ ನೋಡಿ ಪ್ರಯೋಗಕ್ಕಿಳಿದರೆ ನೆಟ್ಟ ಗಿಡಗಳು ಪ್ರತಿಫಲ ಕೊಟ್ಟೇ ಕೊಡುತ್ತವೆ ಎನ್ನುವುದಕ್ಕೆ ಅಜಿತರ ತೋಟವೇ ಸಾಕ್ಷಿ.
" ಬಿತ್ತಿದ ಬೀಜ ನೆಟ್ಟ ಗಿಡ ಯಾವುದೇ ಇರಲಿ ಅವುಗಳನ್ನ ನಿರಂತರ ಗಮನಿಸುವ ಕಾಲಪ್ರಜ್ಞೆ ರೈತನಿಗೆ ಬಹಳ ಮುಖ್ಯ. ಹಾಗೆಯೇ ಮನುಷ್ಯ ಬಗೆಬಗೆ ಆಹಾರ ತಿನ್ನುವ ಹಾಗೆಯೇ ಗಿಡಗಳಿಗೂ ಒಂದೇ ರೀತಿಯ ಗೊಬ್ಬರಗಳನ್ನು ಒಳಸುರಿಯಾಗಿ ನೀಡಬೇಕು. ಅದು ರಾಸಾಯನಿಕ ಇರಬಹುದು, ಸಸ್ಯಜನ್ಯ- ಪ್ರಾಣಿಜನ್ಯ ಗೊಬ್ಬರಗಳಿರಬಹುದು ಅವುಗಳನ್ನ ಬುಡ ಎಲೆ ಚಿಗುರು ಎಲ್ಲದಕ್ಕೂ ಆಗಾಗ ಕೊಡುತ್ತಿರಬೇಕು". ಎನ್ನುವ ಅಜಿತ್ ಪ್ರಸಾದ್ "ಕೃಷಿಯಿಂದ ಸ್ವಾವಲಂಬಿಯಾಗಬೇಕು, ಲಾಭ ಪಡೆಯಬೇಕು ಎನ್ನುವ ಪ್ರಯೋಗಶೀಲ ರೈತ ಯಾವತ್ತೂ ಒಂದೇ ಕೃಷಿಯನ್ನು ನಂಬಲೇಬಾರದು. ಮೇಟಿಕೂಡ ಒಂದು ಕಾರ್ಪೊರೇಟ್ ಜಗತ್ತು. ಅಲ್ಲಿ ನಾವು ಹೇಗೆ ಲಾಭ ದಾಯಕ ವ್ಯವಸ್ಥೆಯನ್ನು ನಿರೀಕ್ಷಿಸುತ್ತೇವೆಯೋ ಅದೇ ರೀತಿ ವರ್ಷವಿಡಿ ಕಾರ್ಮಿಕರಿಗೆ ದುಡಿಯಲು ಅವಕಾಶ ಇರುವ ಬಹು ಬೆಳೆ ಕೃಷಿಯನ್ನು ಅವಲಂಬಿಸಿ ಬಹುದಾರಿಯಲ್ಲಿ ಲಾಭ ಪಡೆಯಬೇಕು ಎನ್ನುತ್ತಾರೆ . ಸುಮಾರು ಹದಿನೈದು ಖಾಯಂ ಯುವ ಕೆಲಸಗಾರರನ್ನು ಹೊಂದಿರುವ ಅಜಿತ್ ಪ್ರಸಾದ್ ನೀರಾವರಿಗಾಗಿ ಇಡೀ ತೋಟದ ಒಳಗಡೆ ಸ್ವಯಂ ಚಾಲಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ.