ಬೇಸಿಗೆ ಎಳ್ಳು 35 ಎಕರೆಯಲ್ಲಿ ಬೆಳೆದ ರೈತ.
4 ರಿಂದ 5 ಕ್ವಿಂಟಾಲ್ ಇಳುವರಿ ನೀಡುವ ಬೇಸಿಗೆ ಎಳ್ಳು 35 ಎಕರೆಯಲ್ಲಿ ಬೆಳೆದ ರೈತ.
ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಳವಾರ ಗ್ರಾಮದ ರೈತರಾದ ವಿಜಯ ಕುಮಾರ ಸಾಹುಕಾರ್ ಕಲಬುರ್ಗಿ ಇವರು ಕಳೆದ ನಾಲ್ಕು ವರ್ಷದಿಂದ ವಿವಿಧ ತಳಿಯ ಅಧಿಕ ಇಳುವರಿ ನೀಡುವ ಎಳ್ಳು ಬೆಳೆಯುತ್ತಿದ್ದಾರೆ.
ಕೃಷಿ ವಿಜ್ಞಾನ ಕೇಂದ್ರ ಬೀದರ್ ನ ಹಿರಿಯ ವಿಜ್ಞಾನಿಗಳಾದ R.L ಜಾಧವ್ ಸರ್ ರವರ ಮಾರ್ಗದರ್ಶನದಲ್ಲಿ ಸ್ವೆತಾ ತಳಿ ಮತ್ತು 1020 ತಳಿ ಹಾಗೂ ಹೊಸದಾಗಿ ICAR - IIOR ಹೈದರಾಬಾದ್ ನ ವಿಜ್ಞಾನಿಗಳಾದ ರಮ್ಯಾ ಮೇಡಂ ರವರಿಂದ TTT1 ಎನ್ನುವ ಹೊಸ ತಳಿಯ ಎಳ್ಳು ಒಟ್ಟು 35 ಎಕರೆ ಎಳ್ಳನ್ನು ಬೆಳೆದಿದ್ದಾರೆ.
ಸಾಮಾನ್ಯವಾಗಿ ಈ ಭಾಗದಲ್ಲಿ ಹತ್ತಿ ಮತ್ತು ಮೆಣಸಿನಕಾಯಿ ಜಾಸ್ತಿ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಇದು ಡಿಸೆಂಬರ್ ತಿಂಗಳಿಗೆ ಪೂರ್ತಿ ಬೆಳೆ ಮುಗಿದು ನೇಗಿಲು ಹೊಡೆದು ಬಿಟ್ಟು ಬಿಡುತ್ತಾರೆ ಮತ್ತೆ ಜೂನ್ ತಿಂಗಳಿಂದ ಬಿತ್ತನೆ ಕಾರ್ಯ ನಡೆಯುತ್ತೆ.
ಆದರೆ ವಿಜಯ್ ಕುಮಾರ್ ರವರು ಈ ವಿಶೇಷವಾದ ಎಳ್ಳಿನ ತಳಿಯನ್ನ ಜನವರಿಯಿಂದ ಫೆಬ್ರುವರಿ ತಿಂಗಳೊಳಗೆ ಬಿತ್ತನೆ ಮಾಡುತ್ತಾರೆ ಮತ್ತು ಮೇ ತಿಂಗಳಲ್ಲಿ ಬೆಳೆ ಬಂದು ಬಿಡುತ್ತೆ.
ಹತ್ತಿ ಮತ್ತು ಮೆಣಸಿನ ಕಾಯಿಗೆ ಬಿಟ್ಟಿರುವ ಸಾಲುಗಳನ್ನೇ ಬಳಸಿಕೊಂಡು ಒಂದು ಅಡಿ ಅಂತರದಲ್ಲಿ ಬೋದಿನ ಎರಡೂಕಡೆ ಎಳ್ಳನ್ನು ಬಿತ್ತನೆ ಮಾಡುತ್ತಾರೆ.
ಇದಕ್ಕೆ ನಾಲ್ಕು ಬಾರಿ ನೀರು ಕೊಟ್ಟರೆ ಸಾಕು ಮತ್ತು ಎಕರೆಗೆ ಕೇವಲ 15 kg ಯೂರಿಯ ಗೊಬ್ಬರ ಹಾಕಿದರೆ ಸಾಕು ಹೆಚ್ಚಿನದೇನೂ ಬೇಕಿಲ್ಲ ಅಂತ ಹೇಳುತ್ತಾರೆ.
ಇದಕ್ಕೆ ಕೀಟ ರೋಗಗಳ ಸಮಸ್ಯೆ ಕೂಡಾ ಕಡಿಮೆ ಇದ್ದು ಸಾಧಾರಣ ಔಷದಿಗಳನ್ನ ಮತ್ತು ಲಘು ಪೋಷಕಾಂಶಗಳನ್ನು ಎರಡು ಮೂರು ಬಾರಿ ಸಿಂಪರಣೆ ಮಾಡಿದರೆ ಸಾಕು ಎಂದು ಹೇಳುತ್ತಾರೆ.