ನಿಜವಾದ ನಾಯಕ ನಟ
ರಾಜ್ ರವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ರವರ ಚಿತ್ರರಂಗದಲ್ಲಿ ನಾಯಕನಾಗಿ ಪ್ರವೇಶಿಸಿದ ಬಗ್ಗೆ ಚರ್ಚೆಯಾಗುತ್ತಿದೆ. ಅವರು ನೋಡಲು ಸುಂದರವಾಗಿಲ್ಲ ಹಾಗೆ ಹೀಗೆ ಎಂದು ನಕರಾತ್ಮಕ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಈ ರೀತಿ ಹೇಳೋದು ಅದು ಅವರ ವೈಯಕ್ತಿಕ ಅಭಿಪ್ರಾಯ. ಯಾರಿಗೆ ಯಾವುದು ತೋಚುತ್ತೋ, ಹೇಗೆ ಅನಿಸುತ್ತೋ ಹಾಗೆ ಅವರ ಅಭಿಪ್ರಾಯ ಹೇಳೋದರಲ್ಲಿ ತಪ್ಪಿಲ್ಲ. ಮೇಲಾಗಿ ನಾಯಕ ಎಂದರೆ ಹೀಗೆಯೇ ಇರಬೇಕು ಎಂಬುದನ್ನೂ ಹೇಳುತ್ತಾರೆ.
ಚಿತ್ರರಂಗದಲ್ಲಿ ಮೊದಲಿನಿಂದಲೂ ಗಮನಿಸುತ್ತ ಬಂದರೆ ಇಲ್ಲಿಯವರೆಗೂ ನಾಯಕ, ಖಳನಾಯಕ, ಪೋಷಕ, ಹಾಸ್ಯ ಪಾತ್ರಗಳನ್ನು ಮಾಡುವವರು ದೈಹಿಕವಾಗಿ ಹೀಗೆಯೇ ಇರಬೇಕೆಂಬ ನಿಯಮ ಚಿತ್ರರಂಗದಲ್ಲಿ ಎಲ್ಲೂ ಇಲ್ಲ. ಹಾಗೆಯೇ ರಂಗಭೂಮಿಯಲ್ಲೂ ಸಹ. ಆಗಿನಿಂದ ಈಗಿನವರೆಗೂ ಎಲ್ಲ ನಾಯಕರೂ ಸುಂದರರೇ. ಅವರಲ್ಲಿ ಪ್ರತಿಭೆ ಇದ್ದರೆ, ಆ ಪಾತ್ರವನ್ನು ಸಮರ್ಥವಾಗಿ ಮಾಡಿದರೆ ನೋಡೋಕೆ ಸಾಧಾರಣವಾಗಿದ್ದರೂ ಪ್ರೇಕ್ಷಕರು ಒಪ್ಪಿ ಬಿಡುತ್ತಾರೆ.
ರಜನೀಕಾಂತ್ ಕಪ್ಪಗಿದ್ದರು, ಕಮಲಹಾಸನ್ ಅಂದವಾಗಿದ್ದಿಲ್ಲ, ನಿರ್ದೇಶಕ ಸಿದ್ದಲಿಂಗಯ್ಯ ರವರ ಮಗ ಮುರುಳಿ ಕಪ್ಪು ಹಾಗೂ ಕುಳ್ಳಗಿದ್ದರು. ನಮ್ಮ ರಾಜ್ ರವರಿಗೆ ಉದ್ದ ಮೂಗು ಎನ್ನುತ್ತಿದ್ದರು. ಅವರ ಹಾಡುಗಾರಿಕೆಯ ಧ್ವನಿ ನಾಟಕಗಳಿಗೆ ಸೀಮಿತ ಎಂದಿದ್ದರು. ರಾಜ್ ಪೌರಾಣಿಕ ಪಾತ್ರಗಳಿಗೆ ಲಾಯಕ್ಕೆಂದರು, ಪ್ಯಾಂಟ್ ಶರ್ಟ ಒಪ್ಪುವುದೇ ಇಲ್ಲವೆಂದರು. ಆದರೆ ರಾಜ್ ಅವೆಲ್ಲವನ್ನೂ ದಾಟಿ ಬಂದರು. ಇವರುಗಳ ಕಾಲದ ಯಾವ ಪ್ರೇಕ್ಷಕರು ಇವರ ಮುಖವನ್ನು ನೋಡಿ ಮಣೆ ಹಾಕಲಿಲ್ಲ. ಅವರಲ್ಲಿದ್ದ ಪ್ರತಿಭೆ ಕೈ ಹಿಡಿಯಿತು. ಅದೃಷ್ಟವೂ ಕೂಡಿತು. ಯಾರ ಅದೃಷ್ಟ ಹೇಗಿದೆ ಯಾರಿಗೆ ಗೊತ್ತು.
ನಮ್ಮ ಕನ್ನಡದಲ್ಲಿ ಎಷ್ಟೊಂದು ಸುಂದರ ಮುಖಚರ್ಯೆವುಳ್ಳವರು ಎಷ್ಟು ಕಲಾವಿದರಿಲ್ಲ. ಆದರೆ ಅವರನ್ನು ಯಾಕೆ ಸ್ಟಾರ್ ಗಳನ್ನಾಗಿ ಮಾಡಲಿಲ್ಲ. ರಾಜೇಶ್, ರಮೇಶ್, ಗಂಗಾಧರ್, ರಾಮಗೋಪಾಲ್, ಬಸಂತಕುಮಾರ್ ಪಾಟೀಲ್, ಬಾಲರಾಜ್, ಕುಃ ಬಂಗಾರಪ್ಪ... ಹೀಗೆ ಎಷ್ಟೋ ಕಲಾವಿದರು ನಾಯಕನಾದರೂ ಬಹಳ ಕಾಲ ಉಳಿಯಲಿಲ್ಲ. ಇಂಥವರು ಇದ್ದರು ಎಂಬುದನ್ನು ಬಿಟ್ಟರೆ, ಅವರ ಬಗ್ಗೆ ಬೇರೆ ವಿಷಯಗಳೇ ಗೊತ್ತಿಲ್ಲ. ಶಿವಣ್ಣ, ರಾಘಣ್ಣ ಅಪ್ಪು ರವರ ಬಗ್ಗೆ ಕೊಂಕು ತೆಗೆದವರು ಎಷ್ಟು ಜನರಿಲ್ಲ. ಅಂದು ಮಾತಾಡಿದ ರೀತಿಯೇ ಇಂದೂ ಅದೇ ರೀತಿ ಮಾತಾಡುತ್ತಿದ್ದಾರೆ.
ಕಾಶೀನಾಥರು ನಿರ್ದೇಶಕರಾಗಿ ಬಂದರು. ಆದರೆ ಅನುಭವ ಚಿತ್ರದಲ್ಲಿ ತಾವೇ ನಾಯಕರಾಗಿ ಮಾಡಿದರು. ಅವರಲ್ಲಿ ಯಾವ ಹೀರೋ ಲಕ್ಷಣಗಳಿದ್ದವು. ಸುಂದರತೆಯಲ್ಲಾಗಲೀ, ದೈಹಿಕವಾಗಿಯಾಗಲೀ ನಾಯಕನ ಪಾತ್ರಕ್ಕೆ ಯಾವ ಲಕ್ಷಣಗಳೂ ಇದ್ದಿಲ್ಲ. ತಮ್ಮ ಪ್ರತಿಭೆಯಿಂದ ಗೆದ್ದರು. ನಿರ್ದೇಶನದ ಜೊತೆ ನಟನನ್ನಾಗಿಯೂ ಗುರುತಿಸಿದರು.
ಇನ್ನು ಷಣ್ಮುಖ ಗೋವಿಂದರಾಜ್ ರವ ಬಗ್ಗೆ ದೊಡ್ಮನೆಯವರನ್ನು ಕಂಡರಾಗದವರು ಚೆನ್ನಾಗಿಲ್ಲದ ಇವರನ್ನು ಟಾರ್ಗೆಟ್ ಮಾಡುತ್ತಾರೆ ಎನ್ನುವರು. ಯಾಕೆ ಅಂಥ ಅವಿವೇಕಿಗಳ, ಕವಡೆ ಕಾಸಿನ ಕಿಮ್ಮತ್ತಿಲ್ಲದವರ ಮಾತಿಗೆ ಬೆಲೆ ಕೊಡಬೇಕೆ. ಅಂಥವರನ್ನು ಉದಾಸೀನ ಮಾಡಬೇಕು.
ಒಬ್ಬ ನಟನನ್ನು ಬೆಳೆಸುವುದು ಪ್ರೇಕ್ಷಕ ಹೊರತು ಬೇರೆ ಯಾರೂ ಅಲ್ಲ. ಅವನನ್ನು ಒಪ್ಪಿಕೊಂಡರೆ, ನಿರ್ಮಾಪಕ ನಿರ್ದೇಶಕರು ತಾವಾಗಿಯೇ ಅವರಲ್ಲಿಗೆ ಹೋಗುತ್ತಾರೆ. ಗೆಲ್ಲೋದು ಬಿಡೋದು ಅವರಿಗೆ ಬಿಟ್ಟಿದ್ದು, ಚಿತ್ರರಂಗಕ್ಕೆ ಬರಬೇಡಿರಿ ಎನ್ನೋದಕ್ಕೆ ನಾವ್ಯಾರು. ಅದೃಷ್ಟ ಇದ್ದರೆ ಗೆಲ್ಲುವರು, ಇಲ್ಲದಿದ್ದರೆ ಪ್ರಯತ್ನ ಇಲ್ಲಿಗೆ ಮುಗಿಯುವುದು.
ಇನ್ನೊಂದು ವಿಷಯ. ಹಿಂದೆ ಚಿತ್ರರಂಗದವರ ಮಕ್ಕಳು, ಸಹೋದರರು, ಸಂಬಂಧಿಗಳು ಚಿತ್ರರಂಗಕ್ಕೆ ಬಂದಾಗ, ಯಾರೂ ಅವರಿಗೆ ತಡೆಯೊಡ್ಡಲಿಲ್ಲ, ಚಕಾರವೆತ್ತಲಿಲ್ಲ. ಷಣ್ಮುಖ ರವರ ವಿಷಯದಲ್ಲಿ ಹೀಗೇಕೆ. ಹೌದು ದೊಡ್ಮನೆಯವರು ಅಂದ ಮೇಲೆ ಕಲ್ಲು ಹಾಕುವವರು ಇದ್ದೇ ಇರುತ್ತಾರೆ.
ಒಂದು ಸ್ಪಷ್ಟನೆಃ ಈಗಾಗಲೇ ಷಣ್ಮುಖರವರ ಚಿತ್ರರಂಗದ ಪ್ರವೇಶದ ಬಗ್ಗೆ ನನ್ನ ಆತ್ಮೀಯ ಕೆಲವರು ನಕಾರಾತ್ಮಕವಾಗಿ ಹೇಳಿದ್ದಾರೆ. ಅವರ ಹೇಳಿಕೆಗೆ ಪ್ರತಿಯಾಗಿ ಈ ಹೇಳಿಕೆಯಲ್ಲ. ಅವರ ಹಾಗೆ ನಾನೂ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ತಪ್ಪು ಎನಿಸಿದಲ್ಲಿ ಕ್ಷಮಿಸಿ.