ಮತದಾನ ಜನರಿಗೆ ಏನು ಕೊಡಬೇಕಿತ್ತು?
ಮತದಾನ ಜನರಿಗೆ ಏನು ಕೊಟ್ಟಿದೆ? ಏನು ಕೊಡಬೇಕಿತ್ತು? ಎಂದು ಐದು ನಿಮಿಷ ಯೋಜನೆ ಮಾಡಿದರೆ ಉತ್ತರ ಸಿಕ್ಕುತ್ತದೆ. ಕೆಲವರಿಗೆ ನನ್ನ ಪಕ್ಷ ಗೆಲ್ಲುವಂತೆ ಮಾಡಬಹುದು ಎಂದು ಭಾವಿಸುತ್ತಾರೆ, ಕೆಲವರು ನನ್ನ ನಾಯಕ ಗೆದ್ದು ದೊಡ್ಡ ನಾಯಕ ಆಗಬೇಕು ಎನ್ನುವ ಆಸೆಗೆ ವೋಟು ಹಾಕುತ್ತಾರೆ. ಮತ್ತೆ ಕೆಲವರು ನನ್ನ ಜಾತಿಯವ, ನನ್ನ ಧರ್ಮ ರಕ್ಷಕ, ಭಯಂಕರ ಸಾಮರ್ಥ್ಯ ಇದ್ದವನು, ಭಯಂಕರ ಸಮಾಜ ಸೇವಕ ಎಂದು ಹೆಸರು ಪಡೆದವರು, ಮತ್ತೆ ಕೆಲವರು ನನ್ನ ಗೆಳೆಯ, ನನ್ನ ಮನೆಗೆ ಬಂದು ಹೇಳಿದ್ದಾನೆ, ನನ್ನಲ್ಲಿ ಚಂದಕ್ಕೆ ಮಾತಾಡಿದ, ನನ್ನ ಪರಿಚಯ ಇದೆ ಎನ್ನುವ ಕಾರಣಕ್ಕೆ ತಮ್ಮ ವೋಟು ಉಪಯೋಗಿಸುತ್ತಾರೆ.ಇದು ನಿಜವಾದ ಪ್ರಜಾಪ್ರಭುತ್ವ ದೇಶದಲ್ಲಿ ವೋಟಿನ ಉಪಯೋಗವೇ? ಇದು ನಿಜವಾದ ಪ್ರಜೆಯ ಕೈಗೆ ಕೊಟ್ಟ ಹಕ್ಕೆ? ಇದು ನಿಜವಾದ ಪ್ರಜೆ ಪ್ರಭು ಆಗುವ ದಾರಿಯೇ? ಹಾಗಾದರೆ ಏನು ಮಾಡಬೇಕು.
ಎಲ್ಲಾ ಪ್ರಜೆಗಳಿಗೆ ಜಾತಿ, ಧರ್ಮ ಭೇಧವಿಲ್ಲದೆ ಬದುಕಲು ಅಗತ್ಯವಾಗಿ ಬೇಕಾಗಿದೆ ಆಹಾರ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯ, ರಕ್ಷಣೆ, ನೀರು, ಸಾರಿಗೆ ಇತ್ಯಾದಿ. ಇದು ಬೇಡ ಎನ್ನುವ ಯಾವುದೇ ಜಾತಿ, ಧರ್ಮದವರನ್ನು ಕಾಣಲು ಸಾಧ್ಯವಿಲ್ಲ. ಅದನ್ನು ಪಡೆಯುವುದಕ್ಕಾಗಿ ಯಾವುದೇ ವಸ್ತು, ಸೇವೆ ಪಡೆಯಬೇಕಾದರೆ ತೆರಿಗೆ ಕಟ್ಟಲೆ ಬೇಕು, ಈ ತೆರಿಗೆ ಒಂದು ಸರಕಾರದ ನಿಯಂತ್ರಣದಲ್ಲಿ ಜನರಿಗೆ ದೊರಕುವಂತೆ ಮಾಡುವುದಕ್ಕಾಗಿ ಪ್ರಜಾಪ್ರಭುತ್ವ ಆಡಳಿತ ಬಂದಿದೆ. ಆದರೆ ಇದು ಜನರ ನಿಯಂತ್ರಣದಲ್ಲಿ ಇರಬೇಕಿತ್ತು, ಆದರೆ ಜನಪ್ರತಿನಿಧಿಗಳ ಕೈಗೆ ಅಧಿಕಾರ ಕೊಟ್ಟು ಮೋಸ ಹೋಗಿರುವುದು ತಿಳಿಯಬೇಕಾಗಿದೆ. ಅಧಿಕಾರವನ್ನು ಪ್ರಜೆ ತನ್ನ ಕೈಯಲ್ಲಿ ಇಟ್ಟು, ಕೆಲಸವನ್ನು ಮಾತ್ರ ಜನಪ್ರತಿನಿಧಿಯ ಕೈಗೆ ಕೊಡಬೇಕು ಎನ್ನುವ ಸತ್ಯ ತಿಳಿಯಬೇಕಾಗಿದೆ. ನಮ್ಮ ಮನೆಯ ಕೆಲಸಗಾರನಿಗೆ ಯಾವ ರೀತಿ ಕೆಲಸ ಮಾತ್ರ ಕೊಟ್ಟು ಯಜಮಾನರಾಗಿ ಇರುತ್ತೇವೆಯೋ, ಅದೇ ರೀತಿ ನಮ್ಮ ತೆರಿಗೆಯಿಂದ ಸಂಬಳ ಪಡೆಯುವ ಜನಪ್ರತಿನಿಧಿಗಳಿಗೆ ಕೆಲಸ ಮಾತ್ರ ಕೊಟ್ಟು, ಅಧಿಕಾರ ಕೊಡದೇ ಪ್ರಜಾಪ್ರಭುತ್ವ ದೇಶದಲ್ಲಿ ನಿಜವಾದ ಪ್ರಭು, ನಿಜವಾದ ಯಜಮಾನ ಆಗಬೇಕು. ಅದುವೇ ಪ್ರಜಾಪ್ರಭುತ್ವ.