ಕಡಿಮೆ ಜಾಗದಲ್ಲಿ ದೊಡ್ಡ ಸಾಧನೆ ಮಾಡಿರುವ ರೈತರು
ಮೈಸೂರಿನ ಸಮೀಪದ ಸುತ್ತೂರಿನ ಕೃಷಿ ಮೇಳದಲ್ಲಿ ಕನಕ ಶ್ರೀ ಎರೆಹುಳು ಗೊಬ್ಬರ ಎಂಬ ಮಳಿಗೆ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಅದರ ಮಾಲೀಕರಾದ ಶಿವಣ್ಣ ಅವರು ಕೇವಲ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡದೆ, ಸ್ವತಹ ರೈತರು ತಮ್ಮ ಮನೆ ಅಥವಾ ಜಮೀನುಗಳಲ್ಲಿ ಎರೆಹುಳು ಗೊಬ್ಬರ ಹೇಗೆ ತಯಾರಿಸಿಕೊಳ್ಳಬೇಕು, ನಗರವಾಸಿಗಳು ಮನೆಯಲ್ಲೇ ಸಣ್ಣ ಬಕೆಟ್ ಇಟ್ಟುಕೊಂಡು ಅದರಲ್ಲಿ ಎರೆ ಜಲ ಹೇಗೆ ಪಡೆಯಬಹುದು ಮತ್ತು ಅದರಿಂದಾಗುವ ಉಪಯೋಗಗಳನ್ನು ಉತ್ಸಾಹದಿಂದ ವಿವರಿಸುತ್ತಿದ್ದರು. ಸಜೀವ ಎರೆಹುಳುಗಳನ್ನು ಮತ್ತು ಅದರಿಂದ ಗೊಬ್ಬರ ತಯಾರಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ಹೇಳಿ ಕೊಡುತ್ತಿದ್ದರು. ಸಾಮಾನ್ಯವಾಗಿ ಇಂತಹ ಮೇಳಗಳಲ್ಲಿ ಮಳಿಗೆ ಹಾಕುವವರೆಲ್ಲರ ಉದ್ದೇಶ ತಮ್ಮ ಉತ್ಪನ್ನ ಮಾರಾಟ ಮಾಡಬೇಕೆಂದಿರುತ್ತದೆ. ಆದರೆ ಶಿವಣ್ಣರವರು ರೈತ ಸ್ವಾವಲಂಬಿಯಾಗಬೇಕೆಂದು ನಿಸ್ವಾರ್ಥವಾಗಿ ತಮ್ಮ ಜ್ಞಾನವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದರು.
ಶಿವಣ್ಣರವರ ಮಾತುಗಳಿಂದ ಪ್ರೇರಣೆಗೊಂಡು ಮಳವಳ್ಳಿ ತಾಲೂಕಿನ ಕಿರುಗಾವಲು ಸಮೀಪದ ಮಿಕ್ಕೆರೆ ಗ್ರಾಮದಲ್ಲಿರುವ ಕನಕಶ್ರೀ ಎರೆಹುಳು ಗೊಬ್ಬರ ತಯಾರಿಕಾ ಘಟಕಕ್ಕೆ ಭೇಟಿಕೊಟ್ಟೆ. ಅಲ್ಲಿ ನನಗೆ ಒಂದರ ಮೇಲೊಂದು ಆಶ್ಚರ್ಯಗಳು ಎದುರಾದವು. ಮೊದಲನೆಯದಾಗಿ ಶಿವಣ್ಣರವರಿಗೆ ಸ್ವಂತ ಜಮೀನಿರುವುದು ಕೇವಲ 20ಗುಂಟೆ. ಆ ಸ್ಥಳಕ್ಕೆ ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲ ಮತ್ತು ಸಣ್ಣ ತುಂಡಿನಲ್ಲಿ ಏನುಮಾಡಲಾಗುವುದಿಲ್ಲ. ಹಾಗಾಗಿ ಶಿವಣ್ಣರವರು ಮುಖ್ಯರಸ್ತೆಯಲ್ಲಿ 10 ಗುಂಟೆ ಜಮೀನನ್ನು ಮತ್ತೊಂದು ಕಡೆ 3 ಎಕರೆ ಜಮೀನನ್ನು ಲೀಸ್ ಗೆ ಪಡೆದಿದ್ದಾರೆ.
ಮೂಲತಃ ಮಿಕ್ಕೆರೆ ಗ್ರಾಮದವರಾದ ಶಿವಣ್ಣ ಅವರು ಐಟಿಐ ಮಾಡಿ ಕೆಲ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾರೆ. 1995-99 ವರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಆದರೆ ಏಕೋ ಮನಸ್ಸು ಮಾತ್ರ ಕೃಷಿ ಮಾಡಬೇಕೆಂದು ಹಂಬಲಿಸುತ್ತಿರುತ್ತದೆ. ಕೆಲಸ ಬಿಟ್ಟು ಊರಿಗೆ ಬಂದು ಹೈನುಗಾರಿಕೆ ಪ್ರಾರಂಭಿಸುತ್ತಾರೆ. ಜೆರ್ಸಿ ಹಸುಗಳಿಂದ ಪ್ರತಿನಿತ್ಯ ಸರಾಸರಿ ನೂರು ಲೀ ಹಾಲು ಉತ್ಪಾದಿಸಿ ಡೈರಿಗೆ ಹಾಕತ್ತಾರೆ. 30-40 ಲೀ ಹಾಲನ್ನು ನೇರವಾಗಿ ಗ್ರಾಹಕರಿಗೆ ಮಾರಾಟಮಾಡಲು ಮುಂದಾಗುತ್ತಾರೆ.
ಡೈರಿಯನ್ನು ದೊಡ್ಡಪ್ರಮಾಣದಲ್ಲಿ ಮಾಡಬೇಕೆಂದು ಧನಸಹಾಯ ಪಡೆಯಲು ಕಿರುಗಾವಲಿನ IOB ಬ್ಯಾಂಕ್ ಗೆ ಹೋದಾಗ ಅಲ್ಲಿನ ವ್ಯವಸ್ಥಾಪಕರು ಅವರು ಶಿವಣ್ಣ ಅವರಿಗೆ ಎಲ್ಲರೀತಿಯ ಸಹಕಾರ ನೀಡುತ್ತಾರೆ
ನಬಾರ್ಡ್ ಬ್ಯಾಂಕಿನ ಅಧಿಕಾರಿಯಾದ ಶ್ರೀ ಬಿಂದು ಮಾಧವ ಒಡವಿ ಅವರು ಪರಿಚಯವಾಗಿ ಮೈಸೂರು ಆಕಾಶವಾಣಿಯ ಕೇಶವ ಮೂರ್ತಿಯವರನ್ನು ಶಿವಣ್ಣರವರ ಮನೆಗೆ ಕರೆತರುತ್ತಾರೆ. ಮುಂದೆ ಆಕಾಶವಾಣಿಯಲ್ಲಿ ಶಿವಣ್ಣ ಅವರ ಸಂದರ್ಶನ ಪ್ರಕಟವಾಗುವುದರ ಜೊತೆ ಹಲವು ಪ್ರಗತಿಪರ ರೈತರ ಪರಿಚಯವಾಗುತ್ತದೆ. ಒಮ್ಮೆ ಕೃಷಿರಂಗದಲ್ಲಿ ಧಾರವಾಡದ ರೈತರೊಬ್ಬರು ತಾವು ಹಸು ಸಾಕುವುದು ಹಾಲಿಗಾಗಿಯಲ್ಲ ಸಗಣಿ ಗಂಜಲಕ್ಕಾಗಿ ಇದರಿಂದ ಗೊಬ್ಬರ ಮಾಡಿ ಮಾರಾಟ ಮಾಡಿ ಸುಖ ಜೀವನ ನಡೆಸುತ್ತಿರುವುದಾಗಿ ತಿಳಿಸುತ್ತಾರೆ. ಈ ಕಾರ್ಯಕ್ರಮ ಕೇಳಿದ ನಂತರ ಶಿವಣ್ಣರಿಗೆ ಹೊಸ ಆಲೋಚನೆಗಳು ಮೂಡುತ್ತದೆ. ರಾಸಾಯನಿಕ ಕೃಷಿ ಮತ್ತು ವಾಣಿಜ್ಯ ಹೈನೋದ್ಯಮದ ಕರಾಳ ಸತ್ಯ ಅರಿವಾಗುತ್ತದೆ. 2015ರಲ್ಲಿ ಹಲವಾರು ನೈಸರ್ಗಿಕ ಕೃಷಿ ಕಾರ್ಯಗಾರಗಳಲ್ಲಿ ಭಾಗವಹಿಸಿ ದೇಸೀ ಹಸು, ವಿದೇಶಿ ಹಸುಗಳ ನಡುವೆ ವ್ಯತ್ಯಾಸ ತಿಳಿಯುತ್ತಾರೆ. ತಮ್ಮ ಬಳಿ ಇದ್ದ ಜೆರ್ಸಿ ಹಸುಗಳನ್ನು ಮಾರಿ ದೇಸಿ ತಳಿಯಗಳಾದ ಹಳ್ಳಿಕಾರ್ ಮತ್ತು ಮಲೆನಾಡು ಗಿಡ್ಡಗಳನ್ನು ಕೊಟ್ಟಿಗೆಗೆ ಕರೆತರುತ್ತಾರೆ. ಜೀವವೈವಿದ್ಯಹೆಚ್ಚಿಸಲು ಒಂದು ಜೊತೆ ಕತ್ತೆ, ಕೆಲ ಬಾತು ಕೋಳಿಗಳು, ಒಂದೆರಡು ಮೇಕೆ ಮರಿಗಳು, ಪೆಟ್ಟಿಗೆ ಜೇನು ಸಾಕಲು ಪ್ರಾರಂಭಿಸುತ್ತಾರೆ. ಕತ್ತೆ ಹಾಲಿಗಂತೂ ಎಲಿಲ್ಲದ ಬೇಡಿಕೆ. ದೂರದ ಊರುಗಳಿಂದ ಮಕ್ಕಳಿಗೆ ಕತ್ತೆ ಹಾಲು ಕುಡಿಸಲು ಜನ ಇವರ ತೋಟಕ್ಕೆ ಬರುತ್ತಾರೆ
ವಾಣಿಜ್ಯದ ದೃಷಿಯಿಂದ ಒಂದಿಷ್ಟು ಜಾಗದಲ್ಲಿ ಹಿಪ್ಪುನೇರಳೆ ಬೆಳೆದು ರೇಷ್ಮೆ ಕೃಷಿಯಿಂದ ಪ್ರಾರಂಭಿಸಿ ಉತ್ತಮ ಆದಾಯ ಗಳಿಸಲಾರಂಬಿಸುತ್ತಾರೆ.
ಪ್ರಾರಂಭದಲ್ಲಿ ಕೇವಲ ತಮ್ಮ ಜಮೀನಿಗೆ ಬೇಕಾದಷ್ಟು ಎರೆಹುಳು ಗೊಬ್ಬರ, ಜೀವಾಮೃತ, ಘನ ಜೀವಾಮೃತ ಇತ್ಯಾದಿ ತಯಾರಿಸಿಕೊಳ್ಳುತ್ತದ್ದ ಶಿವಣ್ಣ ಕ್ರಮೇಣವಾಗಿ ದೊಡ್ಡ ಮಟ್ಟದ ಎರೆಹುಳು ಘಟಕ ಸ್ಥಾಪಿಸುತ್ತಾರೆ.
ವಿಷಮುಕ್ತವಾಗಿ ರಾಜಮುಡಿ, HMT, ಸೇಲಮ್ ಸಣ್ಣ ಸೇರಿದಂತೆ ಹಲವು ದೇಸಿ ತಳಿಯ ಭತ್ತ ಬೆಳೆದು ಒಂದು ವರ್ಷ ಶೇಖರಿಸಿ ನಂತರ ಅಕ್ಕಿ ಮಾಡಿಸಿ ಬೆಂಗಳೂರು - ಮೈಸೂರು ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.
ಶಿವಣ್ಣ ಅವರಿಗೆ ಪತ್ನಿ ಶ್ರೀಮತಿ ಹೇಮಲತಾ ಬೆನ್ನೆಲುಬಾಗಿದ್ದಾರೆ. ರೇಷ್ಮೆ ಹುಳುಗಳಿಗೆ ಸೊಪ್ಪು ದನಕರುಗಳಿಗೆ ಹುಲ್ಲನ್ನು ಇವರೇ ಒಂಟೆತ್ತಿನ ಗಾಡಿಯಲ್ಲಿ ತಂದು ಹಾಕುತ್ತಾರೆ. ಎತ್ತಿನ ಗಾಡಿ ಓಡಿಸುವುದರಲ್ಲಿ ಪರಿಣಿತರು ಹೇಮಲತ. ಎರೆಹುಳು ಸಾಕಾಣೆಯಲ್ಲಿ ಹೇಮಲತ ಅವರ ಕೊಡುಗೆ ಅಪಾರವಾದದ್ದು. ಇನ್ನು ಮನೆಯಲ್ಲಿ ಅಡುಗೆ ಮಾಡಿ ಮಕ್ಕಳನ್ನು ನೋಡಿಕೊಳ್ಳುವ ಹೊಣೆ ತಾಯಿ ಶ್ರೀಮತಿ ಚಿಕ್ಕಮ್ಮ ನವರು ಜೀವಂತವಾಗಿರುವಷ್ಟೂ ಸಮಯ ಹೊತ್ತಿದ್ದರು. ಮಗಳು ಮೋನಿಕಾ ಪ್ರಸ್ತುತ ಇಂಜಿನೆಯರಿಂಗ್ ಮತ್ತು ಮಗ ರವಿ ಪಿಯುಸಿ ಓದುತಿದ್ದರೂ ತಮ್ಮ ಬಿಡುವಿನ ಸಮಯದಲ್ಲಿ ತಂದೆ ತಾಯಿಯರಿಗೆ ಕೃಷಿ ಚಟುವಟಿಕೆಗಳಲ್ಲಿ ಸಹಾಯ ಮಾಡುತ್ತಾರೆ.
ಮಣ್ಣಿನ ಫಲವತತ್ತೆ ಹೆಚ್ಚು ಮಾಡುವಲ್ಲಿ ಎರೆಗೊಬ್ಬರ ಅತ್ಯಂತ ಪರಿಣಾಮಕಾರಿಯಾದದ್ದು. ರೈತರ ಮಿತ್ರಎಂದರೆ ಅದುವೇ ಎರೆಹುಳು. ಆದರೆ ವಿಷ ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಇಂದು ಎರೆಹುಳುಗಳ ಸಂಖ್ಯೆ ಕ್ಷೀಣಿಸಿದೆ. ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರು ಎರೆಗೊಬ್ಬರ ಹೆಚ್ಚು ಬಳಸುತ್ತಾರೆ. ಕೊಡಗು - ಮೈಸೂರಿನ ಶುಂಟಿ ಬೆಳೆಗಾರರು ಶಿವಣ್ಣರಿಂದ ಗೊಬ್ಬರ ಖರೀದಿಸುತ್ತಾರೆ. ಗೊಬ್ಬರಕಿಂತ ಮಿಗಿಲಾಗಿ ಎರೆಹುಳುಗಳನ್ನೇ ಖರೀದಿಸಿ ಸ್ವತಃ ರೈತರೇ ಎರೆಗೊಬ್ಬರ ತಯಾರಿಸಬೇಕು ಎನ್ನುತ್ತಾರೆ ಶಿವಣ್ಣ. ರೈತರು ಪ್ರತಿಸಲ ನಮ್ಮಿಂದ ಎರೆಗೊಬ್ಬರ ಖರೀದಿಸಬೇಕೆಂದಿಲ್ಲ. ಸ್ವಂತ ಜಾಗದಲ್ಲೇ ತೊಟ್ಟಿ ನಿರ್ಮಿಸಿ ಸುಲಭವಾಗಿ ಗೊಬ್ಬರ ತಯಾರಿಸಬಹುದಾಗಿದೆ. ನಾಲ್ಕು ಅಡಿ ಅಗಲ, ಎರಡು ಅಡಿ ಎತ್ತರ ಮತ್ತು ನಮ್ಮ ಅನುಕೂಲಕ್ಕೆ ತಕ್ಕಹಾಗೆ ಉದ್ದವಿರುವ ತೊಟ್ಟಿ ನಿರ್ಮಿಸಿ ಕೆಳಭಾಗದಲ್ಲಿ ಕಾಂಕ್ರೀಟ್ ಹಾಕಿಸಿ ಮಟ್ಟ ಮಾಡಬೇಕು. ನಂತರ ಕೃಷಿ ತ್ಯಾಜ್ಯಾಗಳನ್ನು ಪದರಪದರವಾಗಿ ನಾಲ್ಕು ಇಂಚು ತುಂಬಬೇಕು. ಇದರ ಮೇಲೆ ಸಗಣಿ ಬಗ್ಗಡ ಹಾಕಬೇಕು. ದೇಸಿ ಹಸುವಿನ ಸಗಣಿ ಬಳಸಿದರೆ ಎರೆಹುಳುಗಳ ಬೆಳವಣಿಗೆ ಚೆನ್ನಾಗಿರುವುದಲ್ಲದೇ ಗೊಬ್ಬರದ ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ. ಈ ರೀತಿ ತೊಟ್ಟಿಯನ್ನು ತುಂಬಿಸಿ ಪ್ರತಿ ನಿತ್ಯ ನೀರನ್ನು ಚುಮುಕಿಸುವ ಮೂಲಕ ತೇವಾಂಶ ಕಾಪಾಡಬೇಕು. ಹಾಗೆಂದು ಹೆಚ್ಚು ನೀರು ಹಾಕಿದರೆ ಸಗಣಿ ಮತ್ತು ಕೃಷಿ ತ್ಯಾಜ್ಯಗಳು ಕೊಳೆತೆು ಹುಳು ಸಾಯುತ್ತದೆ.
ಪ್ರಾರಂಭದಲ್ಲಿ ಜೈವಿಕ ಪ್ರಕ್ರಿಯೆಗಳು ವೇಗವಾಗಿ ನಡೆಯುವುದರಿಂದ ಹೆಚ್ಚು ಉಷ್ಣಾಂಶ ಉತ್ಪತ್ತಿಯಾಗುತ್ತದೆ. ಈ ಸಮಯದಲ್ಲಿ ಹುಳುಗಳನ್ನು ಬಿಡಬಾರದು. ಹಾಗಾಗಿ ಎರಡು ಮೂರು ದಿನದ ನಂತರ ಸಗಣಿ ಮತ್ತು ಕೃಷಿ ತ್ಯಾಜ್ಯದ ಪದರಗಳೊಳಗೆ ಕೈಹಾಕಿ ನೋಡಬೇಕು. ಒಂದು ವೇಳೆ ಬಿಸಿ ಆರಿದ್ದರೆ ಮಾತ್ರ ತೊಟ್ಟಿಯ ಅಳತೆ ನೋಡಿಕೊಂಡು 1-2 ಕೆಜಿ ಎರೆಹುಳು ಬಿಡಬೇಕು. ಎರೆಹುಳುಗಳಲ್ಲಿ ಹಲವಾರು ವಿಧಗಳಿವೆ. ಸ್ಥಳೀಯವಾಗಿ ಸಿಗುವ ಸಣ್ಣ ಗಾತ್ರದ ಹುಳುಗಳು ಭೂಮಿಯ ಆಳಕ್ಕೆ ಹೋದರೆ ವಿದೇಶಿ ತಳಿಗಳು ಭೂಮಿಗೆ ಸಮಾನಾಂತರವಾಗಿ ಚಲಿಸಿ ಬಹುಬೇಗ ಕೃಷಿ ತ್ಯಾಜ್ಯಗಳನ್ನು ಗೊಬ್ಬರವಾಗಿಸುತ್ತದೆ. ಶಿವಣ್ಣರವರು ಪ್ರಾರಂಭದಲ್ಲಿ ಹೊರಗಿನಿಂದ ಒಂದೆರಡು ಕೆಜಿ ಎರೆಹುಳು ಖರೀದಿಸಿ ತೊಟ್ಟಿಗೆ ಬಿಟ್ಟಿರುತ್ತಾರೆ. ನಂತರ ತಮ್ಮ ಭೂಮಿಯಲ್ಲಿ ಸಿಗುವ ಸ್ಥಳೀಯ ಎರೆಹುಳುಗಳನ್ನು ಸಹ ತೊಟ್ಟಿಗೆ ಸೇರಿಸಿದ್ದಾರೆ. ಹೀಗೆ ಸಿದ್ದವಾದ ಗೊಬ್ಬರವನ್ನು ತೊಟ್ಟಿಯಿಂದ ಹೊರ ತೆಗೆದು ಹುಳುಗಳನ್ನು ಬೇರ್ಪಡಿಸಿ ಹೊಸ ತೊಟ್ಟಿಗೆ ಬಿಡುತ್ತಾರೆ. ಮಿಕ್ಕೆರೆ ಸುತ್ತಮುತ್ತ ಕಬ್ಬು ಭತ್ತ ಹೆಚ್ಚಾಗಿ ಬೆಳೆಯುವುದರಿಂದ ಕಬ್ಬಿನ ಸೋಗೆ ಭತ್ತದ ಹುಲ್ಲು ಮತ್ತಿತ್ತರ ಕೃಷಿ ತ್ಯಾಜ್ಯ ಸುಲಭವಾಗಿ ದೊರೆಯುತ್ತದೆ. ಇದರ ಜೊತೆಗೆ ಗೊಬ್ಬರದ ಗುಣಮಟ್ಟ ಹೆಚ್ಚು ಮಾಡಲು, ಗ್ಲಿರಿಸಿಡಿಯಾ, ಹೊಂಗೆ, ಬಾಳೆ ದಿಂಡುಗಳನ್ನು ಸಹ ಇದರೊಟ್ಟಿಗೆ ಗೊಬ್ಬರವಾಗಲು ಹಾಕುತ್ತಾರೆ. ಇದೇ ರೀತಿ 200ಲೀ ಪ್ಲಾಸ್ಚಿಕ್ ಡ್ರಮ್ ಗಳಲ್ಲಿ ಮೇಲೆ ತಿಳಿಸಿದ ಹಾಗೆ ಪದರ ಪದರವಾಗಿ ಕೃಷಿ ತ್ಯಾಜ್ಯ ಮತ್ತು ಸಗಣಿ ತುಂಬಿ ಎರೆಹುಳು ಬಿಡುತ್ತಾರೆ. ನಂತರ ಪ್ರತಿ ನಿತ್ಯ ತೇವಾಂಶ ನೋಡಿ ಅದಕ್ಕೆ ತಕ್ಕಹಾಗೆ 1-2ಲೀ ನೀರು ಹಾಕುತ್ತಾರೆ. ಡ್ರಮ್ ನ ಕೆಳಭಾಗದಲ್ಲಿ ಸಣ್ಣ ರಂಧ್ರಮಾಡಿ ನೀರು ಹೊರಬರುವಂತೆ ಮಾಡಿದ್ದಾರೆ. ಸಗಣಿ, ಕೃಷಿ ತ್ಯಾಜ್ಯ ಮತ್ತು ಎರೆಹುಳುಗಳ ಮೈಯಮೇಲಿಂದ ಹರಿದು ಬರುವ ನೀರಿಗೆ ಎರೆ ಜಲ ಎನ್ನುತ್ತಾರೆ. 1ಲೀ ಎರೆ ಜಲಕ್ಕೆ 10ಲೀ ನೀರು ಬೆರೆಸಿ ಬೆಳೆಗಳಿಗೆ ಸಿಂಪಡಿಸಿದರೆ ಹೂವು ಉದುರುವುದು ಕಡಿಮೆಯಾಗಿ ಇಳುವರಿ ಹೆಚ್ಚಾಗುತ್ತದೆ. ಎರೆಜಲದಲ್ಲಿ ಅನೇಕ ರೀತಿಯ ಲಘು ಪೋಷಕಾಂಶಗಳಿದ್ದು ಗಿಡಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಎರೆಹುಳು ಗೊಬ್ಬರ ಮತ್ತು ಎರೆಜಲದೊಂದಿಗೆ ಜೀವಾಮೃತ, ಅಗ್ನಿಅಸ್ತ್ರ ಇತ್ಯಾದಿ ಕಷಾಯಗಳನ್ನು ಮಾಡಿ ಮಾರಾಟ ಮಾಡುತ್ತಾರೆ. ಅದರಲ್ಲೂ ಘನ ಜೀವಾಮೃತದ ಉಂಡೆಗಳಿಗಂತೂ ಬಹಳ ಬೇಡಿಕೆಯಿದೆ. ನಗರಗಳಲ್ಲಿ ಗೊಬ್ಬರ ಸಂಗ್ರಹಿಸಿಟ್ಟುಕೊಳ್ಳುವುದು ಮತ್ತು ಭಾರವಾಗಿರುವ ಕಾರಣ ಮೇಲಿನ ಮಹಡಿಗಳಿಗೆ ಸಾಗಿಸುವುದೂ ಕಷ್ಟ. ಹಾಗಾಗಿ ದೇಸೀ ಗೋವಿನ ಸಗಣಿಗೆ ಬೆಲ್ಲ ನಾಲ್ಕಾರು ಬಗೆಯ ದ್ವಿದಳ ಧಾನ್ಯಗಳ ಹಿಟ್ಟು ಮತ್ತಿತ್ತರ ಮೂಲಿಕೆಗಳನ್ನು ಸೇರಿಸಿ ಸಣ್ಣ ಉಂಡೆ ತಯಾರಿಸುತ್ತಾರೆ. ಈ ಉಂಡೆಗಳು ಹಗುರವಾಗಿದ್ದರೂ ಸತ್ವಭರಿತವಾಗಿರುತ್ತದೆ. ಒಂದು ಕುಂದಕ್ಕೆ 1-2 ಉಂಡೆಗಳನ್ನು ಹಾಕಿದರೆ ಸಾಕು ಗಿಡಗಳಿಗೆ ಪೋಶಕಾಂಷ ಒದಗಿಸುತ್ತದೆ.
ದಿನೇ ದಿನೇ ಶಿವಣ್ಣ ದಂಪತಿಗಳ ಖ್ಯಾತಿ ಎಲ್ಲಕಡೆ ಹಬ್ಬುತ್ತದೆ. ಅದರಲ್ಲೂ ಮೈಸೂರಿನ ಹರೀಶ್ ರವರು ಸೂಕ್ತ ಮಾರುಕಟ್ಟೆ ವ್ಯವಸ್ತೆ ಕಲ್ಪಿಸಲು ಸಹಾಯಮಾಡುತ್ತಾರೆ. ವಾರಾಂತ್ಯದಲ್ಲಿ ಮೈಸೂರು - ಬೆಂಗಳೂರಿನ ತಾರಸಿ ತೋಟದವರಿಗೆ ಎರೆ ಗೊಬ್ಬರ ಸರಬರಾಜು ಮಾಡಲಾಗುತ್ತದೆ.
ನೂರಾರು ಜನ ಖಾಯಂ ಗ್ರಾಹಕರಿಗದ್ದಾರೆ. ಶಿವಣ್ಣರವರ ಗೊಬ್ಬರ ತಯಾರಿಕಾ ಘಟಕಕ್ಕೆ ನೇರವಾಗಿ ಗ್ರಾಹಕರು ಭೇಟಿಕೊಟ್ಟು ಅವರ ಉತ್ಪನ್ನ ಖರೀದಿಸುತ್ತಿದ್ದಾರೆ. ಆಸಕ್ತರು ಇವರ ಘಟಕಕ್ಕೆ ಭೇಟಿಕೊಟ್ಟರೆ ಉಚಿತವಾಗಿ ತರಬೇತಿ ಕೊಡುತ್ತಾರೆ. ಹೇಮಲತಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ಇಲಾಖೆಯ ಹಲವಾರು ಕ್ರಾಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯಮಟ್ಟದ ಸಲಹಾ ಸಮಿತಿಯ ಸದಸ್ಯರಾಗಿ ದೇಶದಾದ್ಯಂತ ಸಂಚರಿಸಿದ್ದಾರೆ. ಇವರ ಪರಿಶ್ರಮಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಕನೇರಿ ಮಠದ ಸ್ವಾಮೀಗಳು, ಡಾ ನಾಗಭೂಷಣ ಹಾಗೂ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಮುಂದೆ ಕೃಷಿ ಆಶ್ರಮ ನಿರ್ಮಿಸಿ ನೂರಾರು ಜನರಿಗೆ ಸಾವಯವ ಕೃಷಿ ಕುರಿತು ತಿಳಿಸುವ ಯೋಜನೆಯಿದೆ ಎನ್ನುತ್ತಾರೆ ಶಿವಣ್ಣ ದಂಪತಿಗಳು. ಒಟ್ಟಿನಲ್ಲಿ ಸ್ವಂತ ಭೂಮಿಯಿಲ್ಲದಿದ್ದರೂ ಕೃಷಿಯಿಂದಲೇ ಉತ್ತಮವಾದ ಬದುಕು ಕಟ್ಟಿಕೊಳ್ಳಬಹುದೆಂದು ನಿರೂಪಿಸಿದ್ದಾರೆ. ಇಂತಹವರಲ್ಲವೇ ಯುವಕರಿಗೆ ಸ್ಫೂರ್ತಿ? ನಿಮಗೂ ಎರೆಗೊಬ್ಬರ, ಎರೆಜಲ, ಎರೆಹುಳು ಮತ್ತು ಈ ನಿಟ್ಟಿನಲ್ಲಿ ಉಚಿತ ತರಬೇತಿ ಬೇಕಿದ್ದರೆ ಸಂಪರ್ಕಿಸಿ 6361562597, 9480043257